ಹಠಾತ್ತನೆ ದಂತಕುಳಿಯಲಿ
ಭರಿಸಲಾಗದ ಸೆಳೆತದ ಸುಳಿ
ಕುಟ್ಟುವ ನೋವಿನ ಪೆಟ್ಟಿನಲಿ
ಶಿರಭಾಗವೂ ಆಗಿ ಬಲಿ!
.
ಗುಟುಕು ಗುಟುಕು ನೀರ ಶೈತ್ಯ
ದಂತಕುಳಿಗೆ ತಂಪು ಜಳಕ
ಮೋರೆಯನು ದಿಂಬಿಗೆ ಒತ್ತುತ್ತ
ನೋವಭಾಗದ ಸುತ್ತ ಸುತ್ತುತ್ತ!
ಲೋಟ ತುಂಬ ಉಪ್ಪು ನೀರು
ಮುಕ್ಕಳಿಸಿ ಗರಗರನೆ ಜೋರು
ನೋವು ನಿವಾರಕವನು ತಿಂದರೂ
ತಡೆಯದೆ ಬಿಕ್ಕಳಿಕೆಯೂ ಶುರು!
ಬಹುತೆರದ ಶಮನೋಪಾಯಗಳಿಗೆ
ಮಣಿಯದಿರೆ ಹಲ್ಲನೋವು ಈ ಬಗೆ
ಹಲ್ಲನ್ನೇ ಕಿತ್ತು ಬಿಟ್ಟರೆ ಹೇಗೆ
ಯೋಚನೆಯೂ ಬಂತು ಹಾಗೇ!
ಹೊಟ್ಟೆ ನೋವು, ಕಿವಿ ನೋವು
ತಲೆ ಶೂಲೆ, ಶೀತ, ಜ್ವರ ವ್ಯಾಧಿ
ಯಾವುದೂ ಈ ಪರಿ ಕಷ್ಟವಿಲ್ಲ
ಮನದಿ ನಿಲ್ಲದ ತರ್ಕ ವಿತರ್ಕ
ಸೆಳೆವ ನರದ ಡಬ್ ಡಬ್ ಬಡಿತ
ತಾಡನದ ಲಯಕೆ ಕಿವಿಗೊಡುತ
ಮೆಲ್ಲನೆ ಅದರಲಿ ತಲ್ಲೀನವಾಗುತ
ಪರಿಪರಿ ಪರಿಹಾರಗಳ ಧ್ಯಾನಿಸುತ
ಬಂದೇ ಬಿಟ್ಟಿದೆ ವೈದ್ಯ ಸಂದರ್ಶನ ದಿನ
ಬೇಗನೆ ಬರಲಿದೆ ನೋವು ನೀಗುವ ಕ್ಷಣ
ದಂತಗೋಪುರವಲ್ಲ, ನಿಜ ಮಾತು ಕಾಣ!
ಬಿಟ್ಟು ಬಿಡು ಚಿಂತೆ, ನಕ್ಕು ಬಿಡು ಜಾಣ!