ಹೊರಚಾವಡಿಯಲಿ ನಿಷ್ಕರ್ಷೆ;ಹೌದು
ಮಾಸು ಗೋಡೆಗಳಿಗೆ ಬೇಕೀಗ ಸುಣ್ಣ-ಬಣ್ಣ:
ಮನೆ ಗೋಡೆಗಳಿಗೆ ಬರಲಿದೆ ಹೊಸ ಬಣ್ಣ;
ಹೊಸ ಬಣ್ಣ ಅಳಿಸಲಿದೆ ನೆನಪಿನ ಚಿತ್ರಗಳನ್ನ
ಕಣ್ತಣಿಯೆ ನೋಡುತಿಹೆ
ನಡುಗೋಡೆಯಲಿ ಶೋಭಿಸಿಹ ಮಂಗಲ ಹಸೆಯ
ಒಳಗಣ್ಣದು ಕಾಣುತಿದೆ
ಸಂಬಂಧಗಳ ರಂಗೋಲಿ ಅರಳಿದ ಸವಿಕತೆಯ
ಓ ಅಲ್ಲಿ ದೇವರ ಕೋಣೆಯ
ಗೋಡೆಗೊಪ್ಪುತಿದೆ ನಸುಗಪ್ಪು ವರ್ಣ
ಶ್ರೀಗಂಧ ಸಿಂಧೂರ ಎಣ್ಣೆಯ ಎರಕ
ಪ್ರತಿದಿನದ ಕಟ್ಟಳೆಗಳ ಸಂಕೇತವಣ್ಣ!
ಚಾವಡಿಯ ಗೋಡೆಯಲಿ
ರಾರಾಜಿಸಿದೆ ಮಕ್ಕಳ ಬಾಲಲೀಲೆ
ಆಟಿಕೆಗಳ ಅಚ್ಚು, ವರ್ಣಮಾಲೆಯ ಗೀಚು
ಕಿರುನಗೆಯ ಮೂಡಿಸಿ ನೆನಪಿನ ಸರಮಾಲೆ
ಹಿಂಬದಿಯ ಗೋಡೆಯಲಿ ನೋಡೆ
ಮನೆ ಮಕ್ಕಳ ಪುಟ್ಟ ಕೈ ಕಾಲುಗಳ ಅಚ್ಚು
ದೀಪಾವಳಿಯ ದಿನ ಸಡಗರದಿ
ಮೂಡಿಸಿದ ಈ ಚಿತ್ರಗಳು ಬಲು ಮೆಚ್ಚು
ಹಳೆಯದು ಹಿಂಸರಿದು ಹೊಸಬಣ್ಣ ಬರಲಿದೆ
ಈ ಹಳ್ಳಿ ಮನೆಯ ಭಿತ್ತಿ ಭಿತ್ತಿಯಲಿ
ನೆನಪಿನ ಚಿತ್ರಗಳು ತಳೆಯುತ ಹೊಂಬಣ್ಣ
ಮನೆ ಮಂದಿಯ ಚಿತ್ತ ಭಿತ್ತಿ ಯಲಿ!