Posted in ಕವನ

ರೆಂಜೆ ಹೂವೇ…

ಎಲೆ ರೆಂಜೆ ಎಲೆ ಪುಟ್ಟ ರೆಂಜೆ

ನರುಗಂಪ ಸೂಸುತ್ತ ನೀ ಈ ಸಂಜೆ

ಎಲೆ ಹಿಂದೆ ಅಡಗಿಹೆಯ ಯಾಕೆ ಈ ಲಜ್ಜೆ

ನಿನ್ನಿರುವನರಿತು ಹಾಕಿಹೆವು ನಿನ್ನೆಡೆ ಹೆಜ್ಜೆ

ಮೈ ತುಂಬ ಪರಿಮಳದ ಸುಗಂಧದರಸಿ

ನಿನ್ನಿರುವ ತಿಳಿಸಿತೆಮಗೆ ಮಾರುತವು ಬೀಸಿ

ಪುಟ್ಟ ಮಕ್ಕಳ ರೀತಿ ಬಂದಿಹೆವು ನಿನ್ನನು ಅರಸಿ

ನಿನ್ನ ಸಾಂಗತ್ಯದಿ ಬಾಲ್ಯವನೆ ಪುನಃ: ಅನುಭವಿಸಿ

ಆ ದಿವ್ಯಕಾಲದಲಿ ಆಗಿದ್ದೆ ನೀ ನಮ್ಮ ಗೆಳತಿ

ಪ್ರತಿ ಸಂಜೆ ಸೆಳೆದಿತ್ತು ನಿನ್ನ ಈ ಮೃದುರೀತಿ

ನಿನ್ನ ಆಯುತಲಿ ತುಂಬುತ್ತಿತ್ತು ಹೂಬುಟ್ಟಿ

ಇಂದಿಗೂ ಸವಿಯಾಗಿದೆ ಆ ನೆನಪ ಬುತ್ತಿ

ಜನ್ಮದಾತೆಯ ಬೀಳ್ಕೊಂಡು ನೀ ಹೊರಟಿರಲು

ಅಪ್ಪಿಕೊಳುವುದು ನಿನ್ನ ಭೂಮಾತೆಯೊಡಲು

ಈ ಸಂಜೆ ಹೊತ್ತಲ್ಲಿ ತುಂಬಲು ನಿನ್ನ ಘಮಲು

ಹೋಲಿಕೆಯು ತೋರುತಿದೆ ಸ್ತ್ರೀಜೀವನದೊ‌ಳು

ಹುಟ್ಟಿ ಒಂದೆಡೆ ಸೇರುತಲಿ ಪೊಡವಿ ನೀ ಕಂಪ ಬೀರೆ

ನಿನ್ನ ಮಾರ್ದವವು ಮಾಡಿ ನಮ್ಮ ಮನಸೂರೆ

ಎಷ್ಟೊಂದು ವರುಷದ ನಂತರದಿ ನಿನ್ನ ಸಂಧಿಸಿ

ಅಂದಿಗೂ ಇಂದಿಗೂ ನೀ ಪ್ರಸ್ತುತವೆನಿಸಿ…

Leave a Reply

Your email address will not be published. Required fields are marked *