ಹೂವು ಮೈಯನು ತೂಗಿ ದಾಸವಾಳ ಗಿಡ ತಾನು
ನಗುನಗುತ ಕಣಿಯ ಹೇಳುತಿಹುದು..
ಕೆಂಡಸಂಪಿಗೆ ಮರ ತನುತುಂಬ ಹೂ ಹೊತ್ತು
ಕಡುಕಂಪ ಸೂಸುತಲಿ ಏನ ಸಾರುತಿಹುದು..
ಬೇವುಮರದಲಿಹ ಕೋಗಿಲೆಯು ಸುಸ್ವರದಿ ಸುವಾರ್ತೆಯೊಂದನು ಉಲಿಯುತಿಹುದು..
ಪ್ರಾರ್ಥನಾ ಸಮಯದಲಿ ಹಲ್ಲಿಯೂ ಲೊಚಗುಟ್ಟಿ ನಮ್ಮಅರಿಕೆಯ ಸಮರ್ಥಿಸಿಹುದು..
ನೀರ ಸೆಳೆತಕೆ ಸಿಕ್ಕ ಇರುವೆಗೆ ಆಸರೆ ಹುಲ್ಲುಕಡ್ಡಿ
ಪರೀಕ್ಷೆಯ ಘಳಿಗೆ; ಸಂಕೇತ ಆತುಕೊಳಲೇನಡ್ಡಿ
ಬಾಳನೌಕೆಯದು ಸೇರಲೇಬೇಕು ದೂರದತೀರ
ಶುಭನಿರೀಕ್ಷೆಯೊಡನೆ ದಾಟುತಲಿ ಈ ಭವಸಾಗರ.