ನಡು ಮಧ್ಯದವನೀತ
ಮೃದು ಮನಸಿನ ನವನೀತ
ಗುಣ ಸ್ವಭಾವದಿ ವಿನೀತ
ಐವತ್ತರ ಹುಟ್ಟುದಿನಕೆ ಈ ನುಡಿಗೀತ
ಇಬ್ಬರಕ್ಕಂದಿರ ಬೆನ್ನಿಗೆ ಈ ತಮ್ಮ
ಇನ್ನೀರ್ವರೊಡಗೂಡಿ ತೋರುತ ಪ್ರೇಮ
ಸದಾ ಪಾಲಿಸುತ ಸೋದರ ಧರ್ಮ
ಭೇದಿಸುತ ‘ಪರಮ ಆನಂದ’ದ ಮರ್ಮ!
ಬಾಲ್ಯದೊಡನಾಟದ ನೆನಪುಗಳು ಸಾವಿರ
ಧಾಂಗುಡಿಯಿಡಲು ನಗೆಯಲೆಯ ಉಬ್ಬರ
ಬಲುತಿಂಬ-ತುಂಟನಿದ್ದ ಈ ‘ಪುಟ್ಟ’ಕುವರ
ಭೀಮಗೆ ತುಸು ಹೆಚ್ಚು ತಿಂಡಿ;ಅಮ್ಮ ಇವನ ಪರ!
ಗುರುಕುಲ-ರಾಮಕೃಷ್ಣಾಶ್ರಮದರಳಿದಬೋಧ
ಬೆಳೆದಂತೆ ಆದ ವಿಚಾರ ಪ್ರಬುದ್ಧ
ಆಟೋ ಇಂಜಿನಿಯರಿಂಗ್ ನಂತರದ
ವಿದೇಶದುದ್ಯೋಗದಿ ಅಪ್ಪನಿಗೆ ಆಧಾರವಾದ
ಕೌಟುಂಬಿಕ ಕಾರಣಕೆ ಮರಳಿ ಊರಿಗೆ ಬಂದು
ಕೈಗಾರಿಕೆಯ ತೆರೆದು ಊರಿನಲೆ ನೆಲೆನಿಂದು
ಆದರ್ಶ ಮೆರೆದನಿವ ಮೌನದಲೆ ಇದ್ದು
ಪರಿವಾರಕ್ಕೆ ಆಗಿ ಆತ್ಮೀಯ ಬಂಧು
ಸೊರಬದ ಸವಿತೆಯು ಪಾವನ ಜೋಡಿ
ಪ್ರಣವ ಪ್ರಭಂಜನರು ಜೀವ ನಾಡಿ
ಇರಲಿ ನಿಮ್ಮ ಜೀವನದಿ ನಿತ್ಯಸುಖ ಶಾಂತಿ
ಈ ಶುಭ ಸಂದರ್ಭ; ಕೋರುವೆವು ಸದಾ ಸಂತೃಪ್ತಿ