ಬೆಳಗಾತ ಮೂಡುತಿಹ ನೇಸರನು ನೋಡಲ್ಲಿ
ಬೆಳಕಿನ ಕಿರಣ ಸಾಸಿರ ನಿನ್ನ ತಟ್ಟುತಿಹವೋ
ತಳುಕಿರುವ ನಿದ್ದೆ, ಬೇಸರವ ಹೊಡೆದೋಡಿಸಿ
ಎಳೆಬಾಲ ನಿನ್ನ ಆಸರೆಯಲಿಹ ಆಲಸ್ಯಕಳೆಯೋ
ಸದ್ದು ಮಾಡುತಿದೆ ಹಕ್ಕಿ ಕೊರಳು ಮಾಮರದಿ
ನಿದ್ದೆ ಹರಿದು ಎಚ್ಚರಕೆ ಬಾ ಮರಳಿ ಮಗನೇ
ಮುದ್ದು ಮೊಗದಲಿಹ ಸುರುಳಿ ಕೂದಲ ಸರಿಸಿ
ಎದ್ದೇಳು ಕಾಯುತಿಹಳಮ್ಮ ನಿನ್ನರಳು ನಗೆಗೆ
ಆಗಸದ ದೂರದಲಿ ಖೇಚರಗಳ ಚಿನ್ನಾಟ
ಮೃಗಗಳ ಸುತ್ತಾಟ ಗೋಚರಿಸುತಿದೆ ನೋಡೋ
ಮಗಾ.. ತಾತನಾಗಲೇ ಮಂತ್ರೋಚ್ಚಾರ ನಿರತ
ನೀಗುತಿಹರೆಲ್ಲರು ನಿದ್ದೆ ಎಚ್ಚರಕೆ ಬಾರೋ
ದಿಗಂತ ಬೆಳಗಿತು ಸೂರ್ಯ ಉದಯಿಸುತಿರೆ
ಮೃಗ ಮನುಜಾದಿ ಕಾರ್ಯೋನ್ಮುಖರಾಗುತಿರೆ
ಸೊಗದಿ ಎನ್ನ ಬಾಳಸೂರ್ಯನೆ ನೀಬೆಳಗೆನುತ
ಜಗದಜನನಿಯರು ಆಂತರ್ಯದಿ ಹರಸುತಿಹರು