
ಅರ್ಥವಾಗುವುದೆನಗೆ ನಿನ್ನ
ಮೌನದೊಳಗಣ ಆ ಪ್ರಶ್ನೆ
ಉತ್ತರವು ಕೋಲ್ಮಿಂಚಂತೆ
ಕಾಣುವಷ್ಟರಲೆ ಮಾಯ!
ಲೆಕ್ಕವಿಲ್ಲದ ನಲಿವಿನ ಕ್ಷಣ
ಹಗುರಗೊಳಿಸಿದೆ ನೋವ ಭಾರ
ಸಮಾಧಾನವಿದ್ದರೂ, ಇಲ್ಲದಿದ್ದರೂ
ಕಾಡುತಿರುವುದಲ್ಲ ಈ ಪ್ರಶ್ನೆ!
ನಿನಗೆಷ್ಟು ನನಗೆಷ್ಟು ಅವರಿವರಿಗೆಷ್ಟು
ಪೂರ್ವನಿರ್ಣಯವಿರಲಿಕ್ಕಿಲ್ಲ
ವಿವೇಚನಾಯುಕ್ತ ಕಾರ್ಯಮಗ್ನತೆಯಲಿ
ನೋವು-ನಲಿವು ಎರಡೂ ದೂರ!
ನಿರ್ಭಾವದ ಆ ಸ್ಥಿತಿಯು
ಆ ದಿವ್ಯದ ಸನಿಹದ ಗಳಿಗೆಯಿರಬೇಕು
ದುರ್ಲಭದ ಈ ತಿಳಿಯಲ್ಲಿ
ಎಲ್ಲ ಪ್ರಶ್ನೆಗಳೂ ಮಂಗಮಾಯ!