ನನ್ನೊಳಗಿನ ನನ್ನ ಸಖಿ
ಬಿಮ್ಮನೆ ಕುಳಿತರೆ
ಸುಮ್ಮನೆ ಹರಟುತ್ತಾ
ಮೌನವ ಮುರಿಯುತ್ತಾಳೆ
ಉಪಚಾರ.. ಥೇಟ್ ಗಗನಸಖಿ!
ಸಿಟ್ ಬ್ಯಾಕ್, ಕೂಲ್,
ರಿಲಾಕ್ಸ್.. ಎಂದೆಲ್ಲ ಹೇಳುತ್ತಾ
ಚೈತನ್ಯ ತುಂಬುತ್ತಾಳೆ
ಸದಾ ಕಾರ್ಯೋನ್ಮುಖಿ
ಕ್ಷಣಕ್ಷಣಕು ಗಮನಿಸುತ್ತ
ಕಾರ್ಯಭಾರವ ನೆನಪಿಸುತ್ತ
ಬೆನ್ನ ಹಿಂದೆ ಬರುತ್ತಾಳೆ
ನಾನಾದರೆ.. ಜ್ವಾಲಾಮುಖಿ!
ಪಾಪ!ಅಮ್ಮನೊಲು ಓಲೈಸಿ
ಕೋಪತಾಪವನಿಳಿಸಿ
ಹೊಂದಿಸಿ ನಡೆಸುತ್ತಾಳೆ
ಆಕೆಯೊಡನೆ ನಾನು ಸುಖಿ
ಎಡವಿದರೆ ಕೈಹಿಡಿದು
ಮೈಮರೆತರೆ ಎಚ್ಚರಿಸಿ
ಮೈದಡವಿ ಸಲಹುತ್ತಾಳೆ
ಆಗಿಲ್ಲ ಮುಖಾಮುಖಿ
ನೇಪಥ್ಯದಲಿ ತಾನಿದ್ದು
ನನ್ನನ್ನು ಮುಂದಿರಿಸಿ
ಸದಾ ಜೊತೆ ಕೊಡುತ್ತಾಳೆ