Posted in ಕವನ

ಚಂಪಾಸಖಿಯಲಿ ಒಂದು ವಿನಂತಿ

ನಿಟ್ಟುಸಿರು ಆಗಿರುವಾಗ ನಿತ್ಯ ಸಂಗಾತಿ

ಅಟ್ಟಾಡಿಸುತಿರುವಾಗ ದಿನದಿನದ ಸಂಗತಿ

ಸ್ಪಂದಿಸಿಹೆ ಒಳಸಂಕಟಕೆ ಓ ಸುಗಂಧವತಿ

ದಟ್ಟ ಪರಿಮಳದೆ ನೀಡಿ ಕ್ಷಣಿಕ ಚಿಂತಾಮುಕ್ತಿ

ಸಂಪಿಗೆಯ ಕಂಪಲಿ ನೀಡುತ ಸಾಂತ್ವನ ಶಕ್ತಿ

ಕಡುಸುಗಂಧದಿ ತೋರುತ ಕಕ್ಕುಲಾತಿ

ಎದುರಲಿ ನಿಂದಿಹೆ ಪ್ರತಿನಿಧಿಸುತ ಪ್ರಕೃತಿ

ಕೇಳುತಿದೆ ಬನ್ನಬಿಡು ಎಂಬ ಪಿಸುಮಾತ ಅಣತಿ

ಅರಿವಿಹುದು ಮನುಜನ ಎಲ್ಲ ಇತಿಮಿತಿ

ಯಾವ ತೆರಕೃತ್ಯಗಳಿಂದಿರಬಹುದೀ ವಿಕೃತಿ

ಕ್ಷಮೆಯ ಕೇಳಲೇಬೇಕು,🙏 ಇಲ್ಲ ಬೇರೆ ನಿವೃತ್ತಿ

ವಿಜ್ಞಾನದೊಡೆ ಸುಜ್ಞಾನ ನೀಡಬಹುದೇ ಸುಮತಿ

ಕಾಣದು ಬರಿಕಣ್ಣಿಗೆ ವೈರಾಣು, ಇದೆಮ್ಮ ಪರಿಮಿತಿ

ವೈರಾಣುವಿಗೆ ಒಪ್ಪಿಸು ನೀ ಈ ನಮ್ರ ವಿನಂತಿ🙏

ಗಂಧದೊಡನೆ ಕಳುಹಿಸು ಅದ ಓ ಸುಗಂಧವತಿ

ಪ್ರಾಯಶ್ಚಿತ್ತದಿ ಬೇಡುವೆನೆಲ್ಲರಿಗೆ ಆರೋಗ್ಯಶಾಂತಿ🙏

Leave a Reply

Your email address will not be published. Required fields are marked *