Posted in ಕವನ

ಗುಲಾಬಿಯೊಂದಿಗೆ

ಮುಳ್ಳು ಕಂಟಿಯ ಮಧ್ಯೆ ನಗುತಿರುವ ಓ ಹೂವೆ
ಮುಳ್ಳ ಸ್ಪರ್ಶಕೆ ನಲುಗುವ ಭಯವಿಲ್ಲವೆ?

ಚೂಪು ಮುಳ್ಳ ಕಂಡರೆ ಹೆದರಿಕೆಯು ನನಗೆ
ಚುಚ್ಚಲದು ಬರುವುದು ರಕ್ತ;ನೋವ ಜೊತೆಗೆ

ಒಳ್ಳೇ ಚೆನ್ನಾಯ್ತು ಏಕೆ ನೋಡುತಿಹೆ ದೂರ ನಿಂತು
ಹತ್ತಿರಕೆ ಬಾ ಇಲ್ಲಿ ಮಾತನಾಡೋಣ ಕುಂತು

ನೀ ನಿಂತ ನೆಲದಲ್ಲಿ ಹುಲ್ಲು ಹಾಸು ಉಂಟು
ಅದರಡಿಗೆ ಕಲ್ಲು ಮಣ್ಣಿನ ಒರಟು ಪದರವುಂಟು

ಅಂತೆಯೇ ನನಗೆ ಮುಳ್ಳ ಕಾಂಡವು ಆಧಾರ
ನಾ ಮೊಗವೆತ್ತಿ ನಗಲು ಅದರ ಸಹಕಾರ

ಕಲ್ಲುಮಣ್ಣಿನ ದಾರಿ ಸಹಿಷ್ಣುತೆಗೆ ರಹದಾರಿ
ಮೊನಚು ಮುಳ್ಳು ತಾನ್ಎಚ್ಚರಿಕೆಯ ಸಾರಿ

ಎಲ್ಲ ಕಲ್ಲುಗಳಿಂದ ಕಲ್ಲೊತ್ತು ಬರದು
ಎಲ್ಲ ಮುಳ್ಳುಗಳಲ್ಲಿ ನಂಜು ಇರದು

ಈ ಅಂತರವ ಗಮನಿಸಿ ಅಂತರವ ಕಾಯುತಿರು
ನಂತರದಿ ಮುಂಬರಿದು ನೀನೆ ನೀನಾಗಿರು

ಊರ್ಧ್ವಮುಖಿಯಾಗು ಕಳೆದು ಸಂಶಯದಂಶ
ಪರಿಮಳದಿ ಪಸರಿಸುತ ನಿತ್ಯ ಸಂತೋಷ

Leave a Reply

Your email address will not be published. Required fields are marked *