ತುಟಿಯಂಚಲ್ಲಿ ನೀನಡಗಿಸಿದ ನಲ್ನುಡಿಯನ್ನ
ಕಣ್ಣಮಿಂಚಲ್ಲಿ ಗುರುತಿಸಿಯೆ ಬಿಟ್ಟಿಹೆ ನಾ
ಮಾತನಾಡೋ ಇನಿಯ ಏಕಿಂಥ ಬಿಗುಮಾನ
ಹೇಳದಿದ್ದರೂ ಸ್ಪಷ್ಟ ಬಚ್ಚಿಟ್ಟ ಪ್ರೀತಿ-ಅಭಿಮಾನ!
ಮಾತಲ್ಲಿ ನೀ ತೋರೆ ಗಾಂಭೀರ್ಯದ ಛಾಪ
ಅರಸುವೆ ನಾನದರಲ್ಲಿ ಒಲವ ಸವಿಲೇಪ
ಕಾಣುವೆ ಹೊಳೆವ ಸುಂದರ ನಯನದೀಪ
ಪ್ರತಿಫಲಿಸಿ ಹೃದಯದ ಪ್ರೀತಿ ನಂದಾದೀಪ
ಎದೆಯಲ್ಲಿ ಸದಾ ಪ್ರವಹಿಸುವ ಸ್ನೇಹದೊರತೆ
ಪ್ರಕಟಿಸುವೆ ನೀ ಸೂಕ್ಷ್ಮದಿ ಆಗದಂತೆ ಕೊರತೆ
ಒಲವಝರಿ ಮೈದುಂಬಿ ಹರಿದಾಗ ನದಿಯಂತೆ
ಸಂತೋಷ ಸಂಭ್ರಮದ ಫಸಲು ಕಂತೆ ಕಂತೆ
ಹಿತಮಿತದ ಸಂವಹನದಿ ಶಾಂತಿಸುಖವದೆಷ್ಟು
ಮಾತಮಂಟಪದಿ ಅರಳುವುದು ಸ್ನೇಹ ಇನ್ನಷ್ಟು
ಮಾತನಾಡೋ ಇನಿಯ ಏಕಿಂಥ ಬಿಗುಮಾನ
ಹೇಳದಿದ್ದರೂ ಸ್ಪಷ್ಟ ಬಚ್ಚಿಟ್ಟ ಪ್ರೀತಿ-ಅಭಿಮಾನ!