ಪುಟ್ಟ ಪುಟ್ಟ ಮೆಣಸು
ಗರಿಗರಿ ಬಿಳಿ ದಿರಿಸು
ಠೀವಿ ಭಾರಿ ಸೊಗಸು
ಎಲ್ಲಿಂದ ಬಂದ್ರೀ ಕೂಸು!
ಘಾಟಿ ಇಳಿಯುತ ಬಂದೀವಿ
ಘಾಟನು ಹೊತ್ತು ಕೊಂಡೀವಿ
ಊಟಕೆ ಖಾರ ತಂದೀವಿ
ಕೂಟದ ಮನೆಗೆ ಹೋಗ್ತೀವಿ!
ಬೇಡಾ ಎಲ್ಲಿಗು ಹೋಗ್ಬೇಡಿ
ನೀವಾಗ್ತೀರಾ ಪುಡಿಪುಡಿ
ಖುಶಿಯು ಆಗಿದೆ ನಿಮ್ಮನ್ನೋಡಿ
ಇಲ್ಲೇ ಇರಿ ನಮ್ಮತೋಟದಿ ನೀವಾಡಿ!
ಅಕ್ಕ ಅಕ್ಕ..ನಮಗ್ಹೋಗ್ಬೇಕೂ
ಕೊಟ್ಟ ಮಾತನು ಉಳಿಸ್ಬೇಕೂ
ತೆಂಗು ಇಂಗು ಜತೆ ನಾವು ಸೇರ್ಬೇಕೂ
ಊಟಕೆ ರುಚಿಯ ಕೊಡ್ಬೇಕೂ
ಎಷ್ಟು ದೊಡ್ಡ ಮಾತಾಡಿದಿರಿ
ಕರ್ತವ್ಯ ನಿಷ್ಠೆಯ ತೋರಿದಿರಿ
ನಮಗೆಲ್ಲರಿಗಾದಿರಿ ನೀವು ಮಾದರಿ
ಆದ್ರೆ ನೀವ್ಹೋದ್ರೆ ನನಗೆ ಬೇಜಾರ್ರೀ
ಅಕ್ಕ ಅಕ್ಕಬೇಜಾರು ಮಾಡ್ಬೇಡ್ರೀ
ನಮ್ಮ ತಮ್ಮ ತಂಗಿ ಇಲ್ಲಿಗೆ ಬರ್ತಾರ್ರೀ
ಅವ್ರೀಗ ಹೂವೊಳಗಡಗಿ ಕುಂತಾರ್ರೀ
ನಾಳೆ ಹೊರಗಡೆ ಬರ್ತಾರ್ರೀ