ಕರವೀರದಾ ಗಿಡವೊಂದು
ಕರತೋಟದಲಿ ಜನಿಸಿ
ಮರವಾಗಿ ಎತ್ತರಕೆ ಬೆಳೆದು
ಕರವೀರಗಳನರಳಿಸಿತು
ಬಿಳಿಕರವೀರಗಳು
ತಿಳಿ ಶಿವನಿಗೆ ಪ್ರಿಯವೆಂದು
ಕಳಿತ ಭಕ್ತಿಯಲಿ ಅಮ್ಮ
ಹೇಳಿದ್ದ ನೆನಪಾಯಿತು
ಕೈಗೆಟುಕದಾ ಹೂವುಗಳು
ಗಗನಕುಸುಮಗಳೇ ಆಗಿ
ಜಗದೀಶಗರ್ಪಿಸುವ ಆಸೆ
ಮಿಗಿಲಾಗಿ ಉಳಿದೇ ಹೋಗಿತ್ತು
ಇಂದು ಇದೇನಾಶ್ಚರ್ಯ
ಚೆಂದದಲಿ ಗೆಲ್ಲ ಕೆಳಚಾಚಿ
ಮಂದಹಾಸದಿ ಮರವು
ತಂದುಕೊಟ್ಟಿದೆ ಹೂಗಳ ಕೈಯಬಳಿಗೆ
ಮೌನದಲಿ ಮರವು ತೋರಿದೀ ಔದಾರ್ಯ
ಮನದಿ ಮೂಡಿಸಿ ಸಹಜ ಮಾಧುರ್ಯ
ನೆನಪು ಹುಟ್ಟಿಸಿ ಅನೇಕರ ಇಂತಹ ಕಾರ್ಯ
ಜೇನಿನಂತಹ ಸಿಹಿಯ ಸಾಹಚರ್ಯ
ಮಾತು ಮರೆತು ಮರದ ಬಳಿ
ಗತಕಾಲದ ನೆನಕೆಯಲಿ ನಿಂತಿರುವೆನು
ನತಮಸ್ತಕಳಾಗಿಹೆ ಮೌನೌದಾರ್ಯದ ತೂಕಕ್ಕೆ
ಕೃತಜ್ಞತೆಯ ಕರವೀರವಿದೆ ಜೋಡಿಸಿದ ಕರದಿ