ನಸುಕು ಹರಿಯುವ ವೇಳೆ
ತುಸುವೆ ಬಿರಿದಿರುವಾಗ
ಭಾಸವಾಗುವುದೆನಗೆ ಇವು
ಹಸಿರು ಸಿರಿದೇಗುಲದಲಿರುವ
ನಸುಕೆಂಪಿನ ದೇವ ಘಂಟೆಗಳಂತೆ!
ಬಿಸಿಲು ಏರುತ ಬರುತಿರೆ ಅವು
ಮಿಸುಕಿ ಅರಳುತ ನಗಲು
ಲಾಸ್ಯದಲಿ ಮಿರುಗುತಲಿ
ಕುಸುಮಬಾಲೆಯರ ಕಿವಿಗಳಿಗೊಪ್ಪುವ
ಹೊಸ ಝುಮ್ಕಿಗಳಂತೆ ಕಾಣುವುವು!
ಕಸುತುಂಬಿ ನಡುಮಧ್ಯಾಹ್ನದಿ
ಎಸಳುಗಳು ಪೂರ್ಣ ಬಿರಿದಾಗ
ಹೊಸತುಭಾವವು ತಾ ಮೂಡಿ
ಬಿಸಿಯ ತಡೆವ ಕಿರುಛತ್ರಿಗಳಂದದಿ
ಬೆಸದಿ ಗೋಚರಿಸುವವು!
ಮುಸ್ಸಂಜೆಯಲಿ ಮುನ್ನ
ಮುಸುಕುವ ಕತ್ತಲಿನಲಿ
ಎಸಳುಗಳ ಒಳಗೆಳೆದು
ತಾಸುಗಟ್ಟಲೆ ಮೌನಕೆ ಸೇರಿ
ಅಸಮ ಆತ್ಮಾನಂದಲಿಹವೋ ಏನೋ!
ದಾಸವಾಳದೀ ಹೂವುಗಳು
ತೋಷಗೊಳಿಸುತ ಮನವ
ಹೊಸಹೊಳಹು ಊಹೆಗಳ ಮೂಡಿಸಿವೆ
ಈಶನ ಕಲಾಗಾರಿಕೆಯ ತಾಣದಲಾತನ
ಆಶಯವು ಎಷ್ಟೊಂದು ಬಗೆಯಲಿ ಪ್ರಕಟ