Posted in ಕವನ

ಅಕ್ಷರ ಮೈತ್ರಿ

ಈ ಗೆಳೆತನವು ಹಿರಿದು, ಇಂದು ನೆನ್ನೆಯದಲ್ಲ
ಈ ಕೆಳೆಯು ಅನುಪಮವು, ಬೇರೆ ಮಾತಿಲ್ಲ
ಈ ಸೆಳೆತದಲಿ ಹಿತವು, ಈ ತರಹ ಬೇರಿಲ್ಲ
ಈ ಎಳೆತದ ಪರಿಗೆ, ಹೋಲಿಕೆಯೆ ಸಲ್ಲ!

ಆ ರೂಢಿಯ ಭೇಟಿ ಶಾಲೆಯಲಿ ಮೊದಲಸಲ
ಸದೃಢ ಪರಿಚಯಕೆ ಹಾದಿಯಾಯಿತಲ್ಲ
ಈ ಗಾಢ ಸ್ನೇಹದ ಬೆಸುಗೆ ಬೆಳೆಬೆಳೆದಂತೆಲ್ಲ
ಆರೂಢವಾಯಿತು ಮನದಿ ಅಕ್ಷರಮಾಲಾ!

ಈ ಅಕ್ಷರ ಮೈತ್ರಿಯಲಿ ಮೌನದಲೆ ಮಾತೆಲ್ಲ
ಈ ಅಕ್ಷಿಗಳಿಗೆ ತೋರಿತಿದು ಎಷ್ಟೆಷ್ಟು ಸೊಲ್ಲ,
ಗವಾಕ್ಷಿಯಿದಗಾಧ ವಾಙ್ಮಯ ಪ್ರಪಂಚಕ್ಕೆಲ್ಲ,
ಈ ಸಕ್ಷಮ ಸಮಕ್ಷಮದಲಿ ಕ್ಷಣದ ಗಣನೆಯೆ ಇಲ್ಲ!

Leave a Reply

Your email address will not be published. Required fields are marked *