ಬೇಳೆ ಕಾಳುಗಳು ಡಬ್ಬಗಳಲಿ
ಜಿನಸಿಗಳಿವೆ ಅಡುಗೆಮನೆಯಲಿ
ಬಾಣಸಿಗನ ಹದವರಿತ ಬೆರಕೆಯಲಿ
ಘಮ್ಮೆನುವ ನಳಪಾಕ ಸಿದ್ಧ!
ವೀಣೆಯಿದೆ ಮೌನದಲಿ
ಗಡಸು ತಂತಿಯ ಸಂಗದಲಿ
ವೈಣಿಕನ ಬೆರಳ ಮೃದು ಮೀಟಿಗೆ
ಹೊಮ್ಮಿತು ಅದ್ಭುತ ಝೇಂಕಾರನಾದ!
ಕೆನೆಮೊಸರ ಭರಣಿಯಲಿ
ಕುಡುಗೋಲನದ್ದಿ ಮುದದಲಿ
ಗೋಪಿಕೆಯರು ಸೇರಿ ಮಥಿಸಿದಾಗ ದಿವ್ಯನವನೀತದುದಯ!
ದೈನಂದಿನ ಕೆಲಸಗಳಲಿ
ಬಿಡುವಿನ ಬಿಡುಗಡೆಯಲಿ
ಜಡ-ಚೇತನಗಳ ಅನುಸಂಧಾನದಲಿ
ಅಮೂರ್ತ ಅಂತರ್ಬೋಧ!